ನೀಚೆ, ಫ್ರೀಡ್ರಿಖ್ ವಿಲ್‍ಹೆಲ್ಮ್
	1844-1900. ಹತ್ತೊಂಬತ್ತನೆಯ ಶತಮಾನದ ಜರ್ಮನಿಯ ಖ್ಯಾತ ದಾರ್ಶನಿಕ. ಶಕ್ತಿ ಸಿದ್ಧಾಂತದ ಪ್ರವರ್ತಕ. ತಾತ ಮುತ್ತಾತರಂತೆ ತಂದೆ ಪಾದ್ರಿಯಾಗಿದ್ದ. ಕ್ರೈಸ್ತರ ನಮ್ರ ಮತ್ತು ಸಾತ್ತ್ವಿಕ ಜೀವನವೇ ಪರಮ ಧ್ಯೇಯವೆಂದು ತಾಯಿತಂದೆಯರ ಮೇಲ್ವಿಚಾರಣೆಯಲ್ಲಿ ಬೆಳೆದ. ತಾಯಿಯಂತೂ ಬಲು ಕಟ್ಟುನಿಟ್ಟಿನ ಆಚಾರಶೀಲ ಪ್ಯೂರಿಟಿನ್ ಪಂತದವಳು. ಚಿಕ್ಕ ವಯಸ್ಸಿನಲ್ಲೇ ತಂದೆ ಸತ್ತನಾಗಿ ಮನೆಯ ಹೆಂಗಸರು ಇವನನ್ನು ಮುದ್ದು ಮಾಡಿ ಹೆಣ್ಣು ಮಗುವಿನಂತೆ ಬೆಳೆಸಿದರಲ್ಲದೇ ಇತರ ಹುಡುಗರೊಡನೆ ಸೇರಬಾರದೆಂದು ತಡೆದು, ತಡೆದು, ಇತರ ಹುಡುಗರೆಂದರೆ ಅಂಜುವಂತೆ ಮಾಡಿಬಿಟ್ಟರು. ಇದರಿಂದ ಶಾಲೆಯಲ್ಲಿ ತನ್ನ ಸಹಪಾಠಿಗಳೊಡನೆ ಆಟ ಪಾಠಗಳಲ್ಲಿ ಹೊಂದಿಕೊಂಡು ಬಾಳುವುದು ಇವನಿಗೆ ಕಷ್ಟವಾಯಿತು. ಶಾಲೆಯಲ್ಲಿ ಈತನನ್ನು ಮರಿಯೇಸು ಎಂದು ಹಂಗಿಸಲು ತೊಡಗಿದರು. ಇವರ ಭಯಕ್ಕೆ ಶಾಲೆ ಬಿಟ್ಟರೆ ಮನೆ, ಮನೆ ಬಿಟ್ಟರೆ ಶಾಲೆ- ಹೀಗಾಗಿ ತನ್ನಷ್ಟಕ್ಕೆ ತಾನು ಕಾಲಕಳೆಯುವುದನ್ನು ಅಭ್ಯಾಸ ಮಾಡಿಕೊಂಡ. ತಾನು ಅಂಜುಬುರುಕನಲ್ಲವೆಂದೂ ತನ್ನಲ್ಲಿ ಶಕ್ತಿ ಇದೆ ಎಂದೂ ಸಾಮಥ್ರ್ಯದ ಕೆಲಸವೊಂದನ್ನು ಮಾಡಿ ಅವರೆಲ್ಲರೂ ಬೆರಗಾಗುವಂತೆ ಮಾಡಬೇಕೆಂದೂ ಬಯಸಿದ. ಗಂಡಸುತನ ಮತ್ತು ಕಚ್ಚೆದೆಗಳಿರುವುದೊಂದೇ ಲೋಕದಲ್ಲಿ ಮರ್ಯಾದೆ ಹಿರಿತನಗಳನ್ನು ಪಡೆಯಲು ಉಪಾಯವೆಂಬುದನ್ನು ಕಂಡುಕೊಂಡ. ಸಣ್ಣ ವಯಸ್ಸಿನಲ್ಲಿ ಇವನಿಗಾದ ತಿರಸ್ಕಾರದ ಅನುಭವಗಳು ಇವನ ಮನಸ್ಸನ್ನು ಕಲ್ಲಾಗಿ ಮಾಡಿದ್ದವು. ಜೀವನದ ಉದ್ದೇಶವೇ ಪೌರುಷವನ್ನು ಸಂಪಾದಿಸುವುದೆಂದು ಮನಗಂಡ. ಹೀಗೆ ಮುಂದಿನ ಇವನ ಶಕ್ತಿ ಸಿದ್ದಾಂತಕ್ಕೆ ಚಿಕ್ಕತನದಲ್ಲೇ ಅಂಕುರಾರ್ಪಣವಾಯಿತು.

	ದೈನ್ಯಾನುಸಂಧಾನವನ್ನೇ ಪ್ರಧಾನ ಧರ್ಮವೆಂದು ಬೋಧಿಸುತ್ತಿದ್ದ ಕ್ರೈಸ್ತ ಧರ್ಮದಲ್ಲಿ ಈತನಿಗೆ ನಂಬಿಕೆ ತಪ್ಪಿದ್ದು ಹದಿನೆಂಟನೆಯ ವಯಸ್ಸಿನಲ್ಲಿ. ಚಿಕ್ಕಂದಿನಲ್ಲಿ ಬಹುಶ್ರಮದಿಂದ ಇವನ ಮೇಲೆ ಹೊದಿಸಿದ್ದ ಮತದ ಹೊದಿಕೆ ಸರಿಯಿತು. ಮತವೆಂದರೆ ಉರಿಯುವಂಥ ಸಿಟ್ಟು ಇವನನ್ನು ಆವರಿಸಿತು. ತಾನು ನೆಚ್ಚಿದ್ದ ಕ್ರೈಸ್ತ ಧರ್ಮದಲ್ಲಿ ನಂಬಿಕೆ ತಪ್ಪಿದ ಮೇಲೆ ಬೇರೆ ಆಸರೆಯೇ ಇಲ್ಲದಂತಾಯಿತು. ನಾಸ್ತಿಕತನದಿಂದ ವಿಷಯ ಸುಖಗಳ ಕಡೆಗೆ ಮನಸ್ಸು ಹರಿಯಿತು. ಕಾಲೇಜಿನಲ್ಲಿ ತನ್ನ ಭೋಗಪ್ರಿಯ ಗೆಳೆಯರೊಡನೆ ಸೇರಿ, ಹಿಂದೆ ಮನಸ್ಸಿನಲ್ಲಿ ಕೂಡ ಭಾವಿಸಲು ಹಿಂಜರಿಯುತ್ತಿದ್ದ ಧೂಮಪಾನ, ಸುರಪಾನಗಳನ್ನು ಅಭ್ಯಾಸ ಮಾಡಿದ. ಗಂಡಸುತನದ ಲಕ್ಷಣಗಳಿವೆ ಎಂದು ಭಾವಿಸಿದ. ಆದರೆ, ಬಲುಬೇಗ ಭೋಗ ಜೀವನದಲ್ಲಿ ಜುಗುಪ್ಸೆ ಹುಟ್ಟಿತು; ಅಲ್ಲಿಯೂ ಮನಸ್ಸಿಗೆ ತೃಪ್ತಿ ಸಿಗಲಿಲ್ಲ.

	ಈ ಸಮಯದಲ್ಲಿ ತನ್ನ ಕದಡಿದ ಮನಸ್ಸಿಗೆ ಶಾಂತಿಯನ್ನು ನೀಡಿದ ಷೋಪೆನ್ ಹೌರ್ ಎಂಬ ಪ್ರಸಿದ್ಧ ಜರ್ಮನ್ ದಾರ್ಶನಿಕನ ಗ್ರಂಥ ದಿ ವಲ್ರ್ಡ್ ಆ್ಯಸ್ ವಿಲ್ ಅಂಡ್ ಐಡಿಯ ಎಂಬುದು ಈತನ ಕೈಗೆ ಸಿಕ್ಕಿತು. ಅದರಲ್ಲಿ ಇವನಿಗೆ ಅನುಗುಣವಾದ ದರ್ಶನ ದೊರಕಿತು. ಜಗತ್ತು ಗೌರವದಿಂದಲೂ ಪೂಜ್ಯಭಾವದಿಂದಲೂ ಆರಾಧಿಸುತ್ತಿದ್ದ ಧರ್ಮಪ್ರವಾದಿಗಳನ್ನು ಮರುಳರೆಂದೂ ಶಕ್ತಿಹೀನರೆಂದೂ ತಮ್ಮ ಶಕ್ತಿ ಹೀನತೆಯನ್ನೇ ಧರ್ಮವಾಗಿ ಬೋಧಿಸಿದ ಮೂಢರೆಂದು ಭಾವಿಸಿದ. ತನ್ನೊಳಗೆ ಕುದಿಯುತ್ತಿದ್ದ ಭಾವನೆಗಳನ್ನು ಹೊರಗೆಳೆದು ಸಮಾಜದಲ್ಲಿ ಕ್ರಾಂತಿಯನ್ನುಂಟು ಮಾಡುವ ಪ್ರಯತ್ನವನ್ನು ಬೇರೊಂದು ವಿಧದಲ್ಲಿ ಸಾಧಿಸಲಾರದವನಾಗಿ ಬರವಣಿಗೆಯ ರೂಪದಲ್ಲಿ ಹೊರಗೆಡವಿದ. ಬಲ, ಅರೆಬಲ, ಮಹಾಬಲ-ಇವುಗಳಿಗಾಗಿ ಹಾತೊರೆಯುವ ಶಕ್ತಿ ಉಪಾಸಕನಾದ. ತಾನು ಕಂಡುಕೊಂಡ ಶಕ್ತಿ ಸಿದ್ಧಾಂತವನ್ನು ತಾನು ಬರೆದ ಗ್ರಂಥಗಳಿಂದ ಪ್ರಪಂಚಕ್ಕೆ ಸಾರಿದ.

	ಸಿದ್ಧಾಂತದಲ್ಲಿ ಶಕ್ತಿಯ ಉಪಾಸಕನಾದ ನೀಚೆ ಕಾರ್ಯಪ್ರಪಂಚದಲ್ಲಿಯೂ ಇದರ ಸಾಧಕನಾಗಲು ಬಯಸಿ ತನ್ನ ಇಪ್ಪತ್ತಮೂರನೇ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿದನಾದರೂ ಕುದುರೆಯ ಮೇಲಿಂದ ಬಿದ್ದು ಎದೆಗೆ ಬಲವಾದ ಪೆಟ್ಟು ತಗಲಿತಾಗಿ ಸೈನಿಕ ವೃತ್ತಿಯನ್ನೂ ಬಿಡಬೇಕಾಯಿತು. ವಿಶ್ವವಿದ್ಯಾಲಯ ಒಂದರಲ್ಲಿ ಭಾಷಾಶಾಸ್ತ್ರದ ಅಧ್ಯಾಪಕನಾದ. ಜೊತೆಗೆ ಬಿಡುವಾದಾಗ ಸಂಗೀತದ ಅಭ್ಯಾಸ ಮಾಡಿದ. ತನಗೆ ಬೇಕಾಗಿದ್ದ ವೀರರಸಪ್ರಧಾನವಾದ ಕ್ಷಾತ್ರಸಂಗೀತಕ್ಕಾಗಿ ವ್ಯಾಗ್ನರ್ ಪ್ರಸಿದ್ಧ ಗಾಯಕನ ಪರಿಚಯ ಮಾಡಿಕೊಂಡ. ಅವನ ಸ್ಫೂರ್ತಿಯಿಂದ ತನ್ನ ಮೊದಲ ಗ್ರಂಥವಾದ ದಿ ಬರ್ತ್ ಆಫ್ ಟ್ರಾಜಿಡಿಯನ್ನು ಬರೆದ. ಸ್ವಲ್ಪ ಕಾಲವಾದ ನಂತರ ವ್ಯಾಗ್ನರ್ ಮಾನವರ ಎದೆಯನ್ನು ಕರಗಿಸುವ ಪ್ರೇಮ ಕನಿಕರ, ಸ್ತ್ರೀಸ್ವಾಭಾವಾನುಗುಣವಾದ ಮಾರ್ದವ-ಇವುಗಳನ್ನು ತನ್ನ ಸಂಗೀತದಲ್ಲಿ ಬೆರೆಸಿ ಅದನ್ನು ಕೇಳಿದ ಜನರು ಕಣ್ಣಿರಿಡುವಂತೆ ಮಾಡಿದ. ಕಠೋರತೆ ಅವಶ್ಯವಾದ ಕಾಲದಲ್ಲಿ ಹೃದಯ ದೌರ್ಬಲ್ಯಕ್ಕೆ ಬೆಂಬಲ ಕೊಡುವ ಸಂಗೀತವನ್ನು ನಿರ್ಮಾಣ ಮಾಡಿದನೆಂದೂ ವ್ಯಾಗ್ನರ್‍ನ ಮೇಲೆ ನೀಚೆ ರೇಗಿ ಬಿದ್ದನಲ್ಲದೇ ಎಲ್ಲರೂ ಕೊಂಡಾಡುತ್ತಿದ್ದ ವ್ಯಾಗ್ನರ್‍ನ ಸ್ನೇಹವನ್ನು ತ್ಯಜಿಸಿದ.

	ನೀಚೆಯ ಕದಡಿದ ಚಿತ್ತಕ್ಕೆ ಕಲೋಪಾಸನೆಯಲ್ಲಿ ಶಾಂತಿ ಸಿಕ್ಕಿದಂತಾಯಿತು. ತತ್ತ್ವ ಚಿಂತನೆಯಿಂದ ಮನಸ್ಸನ್ನು ಸ್ತಿಮಿತಕ್ಕೆ ತರಲು ಪ್ರಯತ್ನಿಸಿದ. ಮನಸ್ಸಿನ ಅಶಾಂತಿಯಿಂದ ದೇಹದ ಆರೋಗ್ಯವೂ ಕೆಟ್ಟಿತು. ಹಾಸಿಗೆ ಹಿಡಿಯುವಷ್ಟು ರೋಗ ಬಲಿಯಿತು. ಒಂದು ದಿನ ಸಾವು ಸಮೀಪಿಸಿತೆಂದು ಭಾವಿಸಿ, ತನ್ನ ಸಹೋದರಿಯನ್ನು ಕರೆದು ನಾನು ಸತ್ತ ಮೇಲೆ ನನ್ನ ಶವದ ಸುತ್ತಲೂ ನನ್ನ ಆಪ್ತಸ್ನೇಹಿತರಲ್ಲದೆ ಇತರರ ಗುಂಪು ಸೇರದಂತೆ ನೋಡಿಕೊಳ್ಳುವೆನೆಂದು ಮಾತುಕೊಡು, ನನ್ನ ಗೋರಿಯ ಸಮೀಪದಲ್ಲಿ ನಿಂತು ಪುರೋಹಿತರು ಇಲ್ಲದ ಸಲ್ಲದ ಪೊಳ್ಳು ಮಾತುಗಳನ್ನು ಹೇಳದಿರಲಿ. ಸತ್ಯ ನಿಷ್ಠನಾದ ವ್ರಾತ್ಯನಾಗಿಯೇ ನನ್ನನ್ನು ಸಾಯಬಿಡಿರಿ, ಎಂದ. ಆದರೆ ರೋಗ ವಾಸಿಯಾಯಿತು. ಮನಸ್ಸು ಸ್ವಲ್ಪಮಟ್ಟಿಗೆ ಸೀಮಿತಕ್ಕೆ ಬಂತು. ಅನಾರೋಗ್ಯದಿಂದ ಆರೋಗ್ಯದ ಮಹತ್ತ್ವದ ಅರಿವಾಯಿತು. ದೌರ್ಬಲ್ಯದಿಂದ ಬಲದ ಮಹಿಮೆಯನ್ನೂ ಅರಿತ. ತಿರಸ್ಕಾರದಿಂದ ಪುರಸ್ಕಾರದ ಬೆಲೆ ತಿಳಿಯಿತು. ಆರೋಗ್ಯ, ಬಲ, ಪುರಸ್ಕಾರ ಇವುಗಳೇ ಜೀವನದಲ್ಲಿ ಮುಖ್ಯವೆಂದು ತೀರ್ಮಾನಿಸಿದ ನೀಚೆ ಅವುಗಳ ಮೇಲ್ಮೆಯೇ ತಿರುಳಾದ ತನ್ನ ಶಕ್ತಿ ಸಿದ್ಧಾಂತವನ್ನು ಕಟ್ಟಿದ.

	ತನ್ನ ಶಕ್ತಿ ಸಿದ್ಧಾಂತವನ್ನು ಸಾರಲು ದಸ್ ಸ್ಪೇಕ್ ಜರತುಷ್ಟ್ರ ಅನ್ನುವ ಗ್ರಂಥವನ್ನು ಬರೆದ. ಸಾಹಸಜೀವನ ಆ ಗ್ರಂಥದ ಮುಖ್ಯ ತಾತ್ಪರ್ಯವಾಯಿತು. ಅಪಾಯದ ಬಾಳನ್ನು ಬಾಳಿ ಎಂಬ ವೀರಸಂದೇಶ ಅದರ ಸಂದೇಶ. ಆ ಗ್ರಂಥದ ಮೂಲತತ್ತ್ವಗಳ ವ್ಯಾಖ್ಯಾನವೇ ನೀಚೆಯ ಇತರ ಗ್ರಂಥಗಳೆಂದು ಧಾರಾಳವಾಗಿ ಹೇಳಬಹುದು. ಈ ಎಲ್ಲ ಗ್ರಂಥಗಳ ಸಿದ್ಧಾಂತ ಶಕ್ತಿ ಸಿದ್ಧಾಂತ. ಈ ಶಕ್ತಿ ಸಿದ್ಧಾಂತವನ್ನು ಅತಿಮಾನವ ಪಂಥ ಎಂದು ಕರೆಯುವ ವಾಡಿಕೆ ಇದೆ. ಹಿಂದಿನ ದೇವರುಗಳೆಲ್ಲ ಮಡಿದರು. ಅತಿ ಮಾನವನ ಅವತಾರವಾಗುವುದಿದೆ. ಅವನ ಮುಂದಾಳುಗಳು ನಾವು ಎಂದು ನೀಚೆ ಸಾರಿದ. ಈ ಅತಿಮಾನವನು ಎಂಥವನು? ಎಲ್ಲರನ್ನು ತನ್ನ ಹುಟ್ಟುದರ್ಪದಿಂದ ತನ್ನಾಡಳಿತಕ್ಕೆ ಪ್ರಭಾವಕ್ಕೆ ಒಳಪಡಿಸಿಕೊಳ್ಳುವ ಸಾಮಥ್ರ್ಯ ಉಳ್ಳವ, ಈ ಸಾಮಥ್ರ್ಯದಲ್ಲಿ ಇವನಿಗೆ ಸರಿಗಟ್ಟುವವರು ಇನ್ನಾರೂ ಇರಲಾರರು. ಇಂಥ ಅತಿಮಾನವನಿಗೆ ಅಡಿಯಾಳುಗಳಾಗಿರುವುದರಲ್ಲಿ ಇತರ ಜನರು ತೃಪ್ತಿ ಪಡೆಯುತ್ತಾರೆ. ಅತಿಮಾನವನ ಕೈಂಕರ್ಯವೇ ಇತರ ಜನರ ಶ್ರೇಯೋಜೀವನದ ಸಾರ. ಈ ಅತಿಮಾನವ ಗುಣವಂತ, ವೀರ್ಯವಂತ, ಸರ್ವಜ್ಞ, ಸರ್ವಶಕ್ತ, ಲೋಕರಕ್ಷಕ. ಇಂಥ ಅತಿಮಾನವನ ಉದ್ಧಾರಕ್ಕಾಗಿ ಎಷ್ಟೋ ಜನರು ತಮ್ಮ ಸ್ವಾರ್ಥವನ್ನೂ ಸುಖವನ್ನೂ ಬದಿಗಿಟ್ಟು ದುಡಿಯಲು ಸಿದ್ಧರಾಗಬೇಕು. ಹಾಗಾಗುವುದರಲ್ಲೇ ಒಂದು ಸಂತೋಷವಿದೆ, ತೃಪ್ತಿ ಇದೆ. ಇದೇ ಅವರ ತತ್ತ್ವ, ಹಿತ, ಪುರುಷಾರ್ಥ. ಇತರರು ಅತಿಮಾನವನಿಗಾಗಿ ಸ್ವಾರ್ಥತ್ಯಾಗ ಮಾಡಬೇಕಾದ ಅಗತ್ಯವೇನು? ಅದು ನಿಸರ್ಗ ನಿಯಮ. ಹೀಗೆ, ಮಡಿದ ಹಿಂದಿನ ದೇವರುಗಳ ಸ್ಥಾನದಲ್ಲಿ ನೀಚೆ ತನ್ನ ಅತಿಮಾನವನನ್ನು ಸ್ಥಾಪಿಸಿದ. ಈ ಹೊಸ ದೇವರ ಆರಾಧನೆಗೆ ಜನರನ್ನು ಕರೆದ.

	ಅತಿಮಾನವನಂಥ ಉದಾತ್ತ ವ್ಯಕ್ತಿ ಅವತರಿಸಬೇಕಾದರೆ ಜಗತ್ತು ಅವನನ್ನು ಸ್ವೀಕರಿಸಲು ಸಿದ್ಧವಾಗಬೇಕು. ಇದನ್ನು ಪಡೆಯುವುದಕ್ಕಾಗಿ ಅವಲಂಬಿಸಬೇಕಾದ ನೀತಿ ಏನೆಂಬುದನ್ನು ವಿಚಾರಿಸಲು ತೊಡಗಿ ತನ್ನ ಅಭಿಪ್ರಾಯಗಳನ್ನು ನೀಚೆ ಎರಡು ಗ್ರಂಥಗಳಲ್ಲಿ ವಿವರಿಸಿದ. ಆ ಗ್ರಂಥಗಳ ಹೆಸರು-ಬಿಯಾಂಡ್ ಗುಡ್ ಅಂಡ್ ಈವಿಲ್ ಮತ್ತು ದಿ ಜೀನಿಯಾಲಜಿ ಆಫ್ ಮಾರಲ್ಸ್ ಎಂದು. ಅವುಗಳ ಮುಖ್ಯಾಭಿಪ್ರಾಯಗಳು ಈ ರೀತಿ ಇವೆ.

	ಪ್ರಕೃತಿ ತಾನೇ ಎರಡು ವಿಧವಾದ ಮಾನವ ಕುಲಗಳನ್ನು ಸೃಷ್ಟಿಸಿದ್ದಾಳೆ. ಕೆಲವರು ಹುಟ್ಟೊಡೆಯರು. ಕೆಲವರು ಹುಟ್ಟಾಳುಗಳು. ಅವರವರಲ್ಲಿರುವ ಶಕ್ತಿಸಂಚಯದ ಪ್ರಮಾಣ ವ್ಯತ್ಯಾಸಗಳೇ ಇದಕ್ಕೆ ಕಾರಣ. ಈ ಶಕ್ತಿಯ ಪ್ರಾದುರ್ಭಾವದಲ್ಲಿ ವ್ಯಕ್ತಿಗತವಾದ ವ್ಯತ್ಯಾಸಗಳಿವೆ. ಈ ತಾರತಮ್ಯಕ್ಕೆ ತಕ್ಕಂತೆ ಮಾನವವರ್ಗಗಳು ಏರ್ಪಡುತ್ತವೆ. ಈ ವರ್ಗಗಳಲ್ಲಿ ಉತ್ಕøಷ್ಟ, ಅಪಕೃಷ್ಟ ಎಂಬ ಸಹಜವಾದ ತಾರತಮ್ಯಗಳಿವೆ. ವರ್ಗಗಳ ತಾರತಮ್ಯವಿಲ್ಲದ ಸಮಾಜ ಉಳಿಯುವುದಿಲ್ಲ. ಈ ತಾರತಮ್ಯತತ್ತ್ವವನ್ನು ಅಂಗೀಕರಿಸುವುದು ನೀತಿಸಿದ್ಧಾಂತಗಳ ಆದ್ಯಕರ್ತವ್ಯ. ಉತ್ಕøಷ್ಟರ ಧರ್ಮ ಒಂದು. ಅಪಕೃಷ್ಟರ ಧರ್ಮ ಮತ್ತೊಂದು. ಒಬ್ಬರ ಧರ್ಮ ಮತ್ತೊಬ್ಬರು ಅವಲಂಬಿಸಿದರೆ ಕೇಡು ತಪ್ಪದು.

	ಜಗತ್ತಿನಲ್ಲಿ ಎರಡು ವಿಧವಾದ ನೀತಿಗಳಿವೆ. ಈ ನೀತಿಗಳಲ್ಲಿ ಒಂದನ್ನು ಯಜಮಾನ ನೀತಿ ಅಥವಾ ಪ್ರಭುನೀತಿ ಎಂದೂ ಮತ್ತೊಂದನ್ನು ಸೇವಕನೀತಿ ಅಥವಾ ದಾಸ ನೀತಿ ಎಂದೂ ನೀಚೆ ಕರೆದಿರುತ್ತಾನೆ. ಒಂದು ಶಕ್ತರ ನೀತಿ ಮತ್ತೊಂದು ಅಶಕ್ತರ ನೀತಿ.

	ಧರ್ಮದ ಮೂಲ ದಯೆಯಲ್ಲ ದರ್ಪ ಎಂಬುದು ನೀಚೆಯ ನೀತಿಶಾಸ್ತ್ರದ ಸೂತ್ರ. ದಯೆಯನ್ನೇ ಧರ್ಮದ ತಿರುಳನ್ನಾಗಿ ಮಾಡಿದ ಮತಗಳಲ್ಲಿ ಮುಖ್ಯವಾದುದು ಕ್ರೈಸ್ತಮತವೆಂದು ನೀಚೆ ನಂಬಿದ್ದ. ಇಂಥ ಮತಗಳು ಜೀವನೋತ್ಸಾಹವನ್ನು ಕುಗ್ಗಿಸುವುದೆಂದೂ ನಿರಾಶಾವಾದಗಳಿಗೆ ಬೆಂಬಲಕೊಡುವುದೆಂದೂ ಭಾವಿಸಿದ್ದ. ಈ ಕಾರಣದಿಂದ ನೀಚೆ ತನ್ನನ್ನು ಕ್ರೈಸ್ತ ಪ್ರತಿಕಕ್ಷಿ ಎಂದು ಕರೆದುಕೊಂಡಿದ್ದಾನೆ. ಅಪಕಾರಿಗೂ ಉಪಕಾರ ಮಾಡಬೇಕೆಂಬ ಯೇಸುವಿನ ನೀತಿಯನ್ನು ಯಾವ ಜನಾಂಗವಾದರೂ ಒಂದು ವಾರದ ಮಟ್ಟಿಗೆ ಆಚರಣೆಗೆ ತರಲಿ. ಆಗ ಅದರ ಗತಿ ಏನಾಗುವುದೆಂಬುದನ್ನೂ ನೀವೇ ನೋಡುವಿರಿ ಎನ್ನುತ್ತಾನೆ, ನೀಚೆ.

	ನೀಚೆಯ ದರ್ಶನದಲ್ಲಿ ಕರುಣೆಗೆ ಅವಕಾಶವಿಲ್ಲ. ಅತಿಮಾನವರಲ್ಲಿ ನಿಪುಣತೆ ಒಂದು ಮುಖ್ಯವಾದ ಗುರಿ; ಕರುಣೆ ಹುಟ್ಟುವುದು ದುರ್ಬಲರ ವಿಷಯದಲ್ಲಿ. ದುರ್ಬಲವಾದವುಗಳ ವಿನಾಶಕ್ಕಾಗಿ ಕಣ್ಣೀರು ಬಿಡುವುದು ಹೃದಯದೌರ್ಬಲ್ಯದ ಲಕ್ಷಣ. ಎದೆಯನ್ನು ಕನಿಕರದ ಬಾಣಗಳು ಇರಿಯದಂತೆ ಕಠೋರತೆಯ ವಜ್ರ ಕವಚವನ್ನು ತೊಡಬೇಕು. ದುರ್ಬಲವಾದವು ಜಳ್ಳು, ಸಬಲವಾದವು ಕಾಳು. ಜಳ್ಳನ್ನು ತೂರಿ ಕಾಳನ್ನು ಆರಿಸುವುದೇ ಪ್ರಕೃತಿನಿಯಮ. ಹೋಗಬೇಕಾದುದಕ್ಕೆ ಮರುಗುವುದೇಕೆ, ಕೊರಗುವುದೇಕೆ ಎಂಬುದು ನೀಚೆಯ ಪಕ್ಷ.

	ಇವೆಲ್ಲ ವಿಷಯಗಳು ಮನಸ್ಸಿನಲ್ಲಿ ಎರಕ ಹುಯ್ದಂತಾದಾಗ ಬಿಸಿಬಿಸಿಯಾಗಿ ನೀಚೆಯ ಮನಸ್ಸಿನ ಭಾಂಡದಿಂದ ಹೊರಗೆ ಸುರಿಯಿತು. ಆ ಬಿಸಿಯನ್ನು ತಾನೇ ತಡೆಯಲಾರದವನಾದ. ಮನಸ್ಸಿನ ನೆಮ್ಮದಿ ತಪ್ಪಿತು. ಜಗತ್ತನ್ನು ಉದ್ಧಾರ ಮಾಡಲು ತಾನು ಅವತಾರವೆತ್ತಿರುವೆನೆಂದು ಭಾವಿಸಲು ಮೊದಲು ಮಾಡಿದ. ತನ್ನ ಮಹಿಮೆಯನ್ನು ತನ್ನ ಕಾಲದವರು ಅರಿಯಲಿಲ್ಲವೆಂದು ಎಲ್ಲರನ್ನೂ ದೂಷಿಸತೊಡಗಿದ.

	ನೀಚೆಯನ್ನು ಸ್ನೇಹಿತರು ಉನ್ಮತ್ತರ ವಿಶ್ರಾಂತಿ ಆಲಯಕ್ಕೆ ಕರೆದೊಯ್ದರು. ಆದರೆ ಇವನ ಮುದಿತಾಯಿ ಇವನನ್ನು ಬಹಳ ಕಾಲ ಅಲ್ಲಿ ಇರಗೊಡಲಿಲ್ಲ. ನಿಸ್ಸಹಾಯಕನಾದ ತನ್ನ ಮಗನನ್ನು ಪುನಃ ತನ್ನ ಮಡಿಲಲ್ಲಿ ಹಾಕಿಕೊಂಡಳು. ತಾನಿರುವವರೆಗೂ ಬೇಕಾದ ಉಪಚಾರ ಮಾಡಿದಳು. ಅವಳು ತೀರಿದ ಅನಂತರ ಸಹೋದರಿ ತನ್ನ ರಕ್ಷಣೆಗೆ ತೆಗೆದುಕೊಂಡಳು. ಆ ಸ್ಥಿತಿಯಲ್ಲಿ ಎಂದೂ ಕಾಣದ ಶಾಂತಿಯನ್ನು ನೀಚೆ ಕಂಡ. ಒಂದು ದಿನ ತಂಗಿ ಅವನ ಸ್ಥಿತಿಯನ್ನು ಕಂಡು ಕಣ್ಣೀರಿಟ್ಟಳು. ಆಗ ನೀಚೆ ಅವಳನ್ನು ನೋಡಿ ತಂಗೀ ಅಳುವುದೇಕೆ, ನಾವೀಗ ಸುಖವಾಗಿರುವೆವಲ್ಲ ಎಂದನಂತೆ.

	ನೀಚೆ ತನ್ನ 56ನೆಯ ವಯಸ್ಸಿನಲ್ಲಿ ಗತಿಸಿದ. ಜರ್ಮನಿಯರ ಮನಸ್ಸಿನ ಮೇಲೆ ನೀಚೆ ಒತ್ತಿದ ಮುದ್ರೆ ಅಚ್ಚಳಿಯದೆ ನಿಂತಿತು. ನೀಚೆ ಜರ್ಮನಿಯ ಶಕ್ತಿಸಿದ್ಧಾಂತದ ಆಚಾರ್ಯನಾದ.
(ಎಂ.ವೈ.; ಜಿ.ಎಚ್.; ಎಸ್.ಎಲ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ